ಯಾಮುನಾಚಾರ್ಯ, ಎಂ -
	 1899-1970. ತತ್ತ್ವಶಾಸ್ತ್ರಜ್ಞರು. ಲೇಖಕರು. 1899 ಸೆಪ್ಟೆಂಬರ್ 3 ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ನಾರಣೈಯ್ಯಂಗಾರ್. ತಾಯಿ ಮಾಣಿಕ್ಯಮ್ಮ. ಇವರ ತಾತ ಗೋವಿಂದಾಚಾರ್ಯ ಸ್ವಾಮಿಗಳು ಪೂರ್ವಾಶ್ರಮದಲ್ಲಿ ಮೈಸೂರು ಸರ್ಕಾರದ ಎಂಜಿನಿಯರ್ ಆಗಿದ್ದರು. ಅವರು ಅನುಭಾವಿಗಳು ಮತ್ತು ನಿಮ್ನವರ್ಗದವರ ಏಳಿಗೆಗಾಗಿ ತುಂಬ ಶ್ರಮಿಸಿ ನೂರಾರು ಆದಿದ್ರಾವಿಡ ಶಿಷ್ಯವರ್ಗವನ್ನು ಬೆಳೆಸಿದ್ದರು. ವೈಷ್ಣವ ಅನುಭಾವವನ್ನು ಕುರಿತ ಇಂಗ್ಲಿಷ್‍ನಲ್ಲಿ ಅವರು ಒಂದು ಪ್ರಮಾಣ ಗ್ರಂಥವನ್ನೂ ಬರೆದಿದ್ದಾರೆ. ತಮ್ಮ ತಾತಂದಿರ ಪ್ರಭಾವದಿಂದ ಯಾಮುನಾಚಾರ್ಯರಿಗೆ ಚಿಕ್ಕಂದಿನಲ್ಲಿಯೇ ತತ್ತ್ವಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಬೆಳೆಯಿತು. ಮೈಸೂರು ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದ ಇವರು ಆ ಕಾಲೇಜಿನಲ್ಲಿ ಅನೇಕ ವರ್ಷಗಳ ಕಾಲ ತತ್ತ್ವಶಾಸ್ತ್ರದ ಅಧ್ಯಾಪಕರಾಗಿದ್ದರು. ಅನಂತರ ಹಾಸನದ ಇಂಟರ್‍ಮೀಡಿಯೆಟ್ ಕಾಲೇಜಿನ ಸೂಪರಿಂಟೆಂಡೆಂಟಾಗಿ ಕೆಲಸ ಮಾಡಿ ನಿವೃತ್ತರಾದರು (1956). ಆಮೇಲೆ ಮೈಸೂರಿನಲ್ಲಿ ಸ್ಥಾಪಿತವಾದ ಗಾಂಧೀ ವಿಚಾರ ಸಂಸ್ಥೆಯ ಅಧ್ಯಕ್ಷರಾಗಿ ಗಾಂಧೀ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವ ಕೆಲಸದಲ್ಲಿ ನಿರತರಾಗಿದ್ದ ಇವರು ಅಮೆರಿಕದ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಾಲ್ಕುತಿಂಗಳ ಕಾಲ ಗಾಂಧೀತತ್ತ್ವ ಮತ್ತು ಭಾರತೀಯ ತತ್ತ್ವಗಳನ್ನು ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದರು. 1967-68ರಲ್ಲಿ ದೆಹಲಿಯ ಗಾಂಧೀ ಪೀಸ್ ಫೌಂಡೇಷನ್ ಅಧ್ಯಕ್ಷರಾಗಿಯೂ ಇವರು ಕಾರ್ಯ ನಿರ್ವಹಿಸಿದರು.

	ಇಂಗ್ಲಿಷ್, ಕನ್ನಡ, ಸಂಸ್ಕøತ ಮತ್ತು ತಮಿಳು ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯಗಳಿಸಿಕೊಂಡಿದ್ದ ಇವರು ಜನಪ್ರಿಯ ಭಾಷಣಕಾರರೂ ಆಗಿದ್ದರು. ತತ್ತ್ವಶಾಸ್ತ್ರ, ಗಾಂಧೀಸಾಹಿತ್ಯ ಮುಂತಾದ ಅನೇಕ ವಿಷಯಗಳನ್ನು ಕುರಿತು ಇವರು ಲೇಖನಗಳನ್ನು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಇವರ ಕೆಲವು ಮುಖ್ಯ ಪುಸ್ತಕಗಳಿವು; ಪಾಶ್ಚಾತ್ಯ ರಾಜಕೀಯ ತತ್ತ್ವಗಳು, ನಮ್ಮ ಆಳ್ವಾರುಗಳು, ಆಧುನಿಕ ತರ್ಕಶಾಸ್ತ್ರ ಸಂಗ್ರಹ, ಮತಧರ್ಮ ತತ್ತ್ವಶಾಸ್ತ್ರ, ಆಚಾರ್ಯ ರಾಮಾನುಜರು. ಮತಧರ್ಮದ ಪುನರುಜ್ಜೀವನ ಮತ್ತು ಮನಸ್ಸು ಎಂಬ ಎರಡು ಪುಸ್ತಕಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿದ್ದಾರೆ.

ಇವರು 1970 ಜನವರಿ 4 ರಂದು ಮೈಸೂರಿನಲ್ಲಿ ನಿಧನ ಹೊಂದಿದರು.					
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ